ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ರೆಸಾರ್ಟ್ ನಲ್ಲಿ ಶಾಸಕರ ಹೊಡೆದಾಟ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಪ್ರಕರಣ ಇತ್ಯರ್ಥಕ್ಕೆ ಸ್ವಾಮೀಜಿಯೊಬ್ಬರು ಎಂಟ್ರಿ ಕೊಟ್ಟಿದ್ದಾರೆ.
ಹೌದು, ಕಂಪ್ಲಿ ಶಾಸಕ ಗಣೇಶ್ ಹಾಗೂ ಹೊಸಪೇಟೆ ಶಾಸಕ ಆನಂದ್ ಸಿಂಗ್ ರೆಸಾರ್ಟ್ ನಲ್ಲಿ ಪರಸ್ಪರ ಬಡಿದಾಡಿಕೊಂಡು ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಕಾಂಗ್ರೆಸ್ ಪಕ್ಷದಲ್ಲಿದ್ದ ಬಂಡಾಯ ಸದ್ಯಕ್ಕೆ ಶಮನವಾಗಿದ್ದು, ಇದೀಗ ಪ್ರಕರಣ ಇತ್ಯರ್ಥ ಪಡಿಸಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇಬ್ಬರೂ ಶಾಸಕರನ್ನು ಒಂದುಗೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಸಂಬಂಧ ನಿನ್ನೆ ಕಂಪ್ಲಿ ಗಣೇಶ್, ರಮೇಶ್ ಜಾರಕಿಹೊಳಿ ಭೇಟಿ ಮಾಡಿ ಪ್ರಕರಣ ಹಿಂಪಡೆಯಲು ಮನವೊಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಆದ್ರೆ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಯಾವ ನಾಯಕರು ಮನವರಿಕೆ ಮಾಡಿಕೊಟ್ಟರು ಆನಂದ್ ಸಿಂಗ್ ಮಾತ್ರ ಪ್ರಕರಣ ಹಿಂಪಡೆಯಲು ಒಪ್ಪುತ್ತಿಲ್ಲ. ಹೀಗಾಗಿ ರಾಜಕಾರಣಿ ಗಳಿಂದ ಇಬ್ಬರನ್ನೂ ಒಂದುಗೂಡಿಸುವುದು ಕಷ್ಟವಿದೆ. ಸ್ವಾಮೀಜಿ ಮೂಲಕ ಪ್ರಕರಣ ಇತ್ಯರ್ಥ ಪಡಿಸಿಕೊಳ್ಳುವಂತೆ ಮಾಜಿ ಸಿಎಂ ಸಲಹೆ ನೀಡಿದ್ದಾರೆ.
ಹರಿಹರ ವಾಲ್ಮೀಕಿ ಮಠದ ಪ್ರಸನ್ನಾನಂದ ಸ್ವಾಮೀಜಿ ಮೇಲೆ ಆನಂದ್ ಸಿಂಗ್ ವಿಶೇಷ ಗೌರವ ಇಟ್ಟುಕೊಂಡಿದ್ದಾರೆ. ಆದ್ದರಿಂದ ಸ್ವಾಮೀಜಿಯನ್ನು ಮುಂದಿಟ್ಟುಕೊಂಡು ಸಮಸ್ಯೆ ಇತ್ಯರ್ಥ ಕೈ ನಾಯಕರು ಪ್ಲಾನ್ ಮಾಡಿದ್ದಾರೆ. ಈ ಸಂಬಂಧ ಸ್ವಾಮೀಜಿ ಜೊತೆ ಮಾತುಕತೆ ನಡೆಸಿದ್ದು, ಪ್ರಕರಣ ವಾಪಸ್ ಪಡೆಯಲು ಮನವೊಲಿಸುತ್ತೇನೆಂದು ಸ್ವಾಮೀಜಿ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಸ್ವಾಮೀಜಿ ಭರವಸೆ ಕೊಟ್ಟ ಬೆನ್ನಲ್ಲೇ ಗಣೇಶ್ ನೀರಿಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ಹಿಂಪಡೆದಿದ್ದಾರೆ.









