ಹೈದರಾಬಾದ್: ಕೃಷಿ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಒಂದು ಕಾಲುವೆಗೆ ಬಿದ್ದು ಸುಮಾರು 15 ಕೃಷಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ತೆಲಂಗಾಣದ ಯಾದಾದ್ರಿ ಜಿಲ್ಲೆಯ ಲಕ್ಷ್ಮಾಪುರದಲ್ಲಿ ನಡಿದಿದೆ.
ಮೌಸಿ ಕಾಲುವೆಗೆ ಟ್ರ್ಯಾಕ್ಟರ್‌ವೊಂದು ಉರುಳಿ ಬಿದ್ದು ಸಂಭವಿಸಿದ ಈ ಘೋರ ದುರಂತದಲ್ಲಿ 3 ವರ್ಷದ ಮಗು ಸೇರಿದಂತೆ 15 ಮಂದಿ ಕೂಲಿ ಕಾರ್ಮಿಕ ಮಹಿಳೆಯರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಹತ್ತಿ ಬೀಜ ಬಿತ್ತನೆಗಾಗಿ ಮಹಿಳೆಯರನ್ನು ಟ್ರ್ಯಾಕ್ಟರ್‌ನಲ್ಲಿ ಕರೆದುಕೊಂಡು ಹೋಗಲಾಗುವಾಗ ವಿರುದ್ಧ ದಿಕ್ಕಿನಿಂದ ದ್ವಿಚಕ್ರ ವಾಹನವೊಂದು ಬಂದಿದ್ದು, ಡಿಕ್ಕಿಯಾಗುವುದನ್ನು ತಪ್ಪಿಸಲು ಯತ್ನಿಸಿದಾಗ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಮೂಸಿ ಕಾಲುವೆಗೆ ಬಿದ್ದಿದೆ ಎಂದು ತಿಳಿದು ಬಂದಿದೆ.
ಟ್ರ್ಯಾಕ್ಟರ್‌ನಲ್ಲಿ 30 ಕ್ಕೂ ಹೆಚ್ಚು ಮಂದಿ ಇದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದು, ಸ್ಥಳದಲ್ಲಿ ಪೊಲೀಸರು, ಸ್ಥಳೀಯರು ರಕ್ಷಣಾ ಕಾರ್ಯ ನಡೆಸಿ ಮೃತರ ಶವಗಳನ್ನು ಮೇಲಕ್ಕೆತ್ತಿದ್ದಾರೆ.









