ಅನಧಿಕೃತ ಪ್ಲೆಕ್ಸ್ ತೆರವು ಮಾಡದ ಬಿಬಿಎಂಪಿ ವಿರುದ್ಧ ಹೈಕೋರ್ಟ್ ಗರಂ!

0
21

ಬೆಂಗಳೂರು: ಕೆಲಸ ಮಾಡಲು ಆಗದಿದ್ದರೆ‌ ಬಿಬಿಎಂಪಿಯನ್ನು ಮುಚ್ಚಿಕೊಂಡು ಹೋಗಿ ಎಂದು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ನೇತೃತ್ವದ

ಹೈಕೋರ್ಟ್ ವಿಭಾಗೀಯ ಪೀಠ ಬಿಬಿಎಂಪಿಗೆ ಚಾಟಿ ಬೀಸಿದೆ.

ನಗರದ ರಿಚ್ ಮಂಡ್ ವೃತ್ತ ಸೇರಿದಂತೆ ಬೆಂಗಳೂರಿನಲ್ಲಿ ಇರುವ ಅನಧಿಕೃತ ಫ್ಲೆಕ್ಸ್‌ ಗಳನ್ನು ತೆರವು ಮಾಡಲು ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಪೀಠ ಬಿಬಿಎಂಪಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಸಣ್ಣಪುಟ್ಟ ಸಮಸ್ಯೆಗಳಿಗೂ ಜನ ಹೈಕೋರ್ಟ್ ಗೆ ಪಿಐಎಲ್ ಹಾಕಿಕೊಂಡು ಬರಬೇಕೇ? ನಿಮಗೆ ಕೋರ್ಟ್ ಸೂಚನೆ ನೀಡದೆ ಕೆಲಸ ಮಾಡಲು ಬರುವುದಿಲ್ಲವೇ? ಕೆಲಸ ಮಾಡಲು ಆಗದಿದ್ದರೆ ಬಿಬಿಎಂಪಿ ಮುಚ್ಚಿಕೊಂಡು ಹೋಗಿ ಎಂದು ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತು. ಮತ್ತು ನಗರದಾದ್ಯಂತ ಗಿಜಿಗುಟ್ಟುತ್ತಿರುವ ಫ್ಲೆಕ್ಸ್ ಗಳನ್ನು ಮಧ್ಯಾಹ್ನದೊಳಗೆ ತೆರವುಗೊಳಿಸುವಂತೆ ಆದೇಶಿಸಿತ್ತು.

ಮಧ್ಯಾಹ್ನದ ವಿಚಾರಣೆ ವೇಳೆ ನಗರಾದಾದ್ಯಂತ 5 ಸಾವಿರ ಫ್ಲೆಕ್ಸ್ ಗಳನ್ನು ತೆರವುಗೊಳಿಸಲಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೈಕೋರ್ಟ್ ಗೆ ತಿಳಿಸಿತು. ಬಿಬಿಎಂಪಿ ಪರ ಹಾಜರಿದ್ದ ವಕೀಲ ವಿ.ಶ್ರೀನಿಧಿ, ಮಧ್ಯಾಹ್ನದ ವೇಳೆಗೆ 5 ಸಾವಿರ ಫ್ಲೆಕ್ಸ್ ಗಳನ್ನು ತೆರವುಗೊಳಿಸಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ತಿಳಿಸಿದರು.

ಇದಕ್ಕೆ‌ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ, “ಹಾಗಾದರೆ ಉಳಿದವುಗಳನ್ನು ರಾತ್ರಿಯೊಳಗೆ ತೆರವುಗೊಳಿಸುತ್ತೀರಾ” ಎಂದು ಪ್ರಶ್ನಿಸಿದರು. ಈ ಮಧ್ಯೆ “ನಾವು ಅಧಿಕೃತವಾಗಿ ಪರವಾನಗಿ ಪಡೆದು ಹಾಕಲಾಗಿರುವ ಫ್ಲೆಕ್ಸ್ ಗಳನ್ನೂ ತೆರವುಗೊಳಿಸಲಾಗುತ್ತಿದೆ” ಎಂದು ದೂರಿ ತೆರವು ಪ್ರಕ್ರಿಯೆ ಸ್ಥಗಿತಕ್ಕೆ ಜಾಹೀರಾತುದಾರರ ಪರ ವಕೀಲರು ಮನವಿ ಮಾಡಿದರು.

ಇದಕ್ಕೆ ತೀವ್ರ ಅಕ್ರೋಶ ವ್ಯಕ್ಯಪಡಿಸಿದ ನ್ಯಾಯಪೀಠ ನಿಮ್ಮದು ಅಧಿಕೃತವೋ ಅನಧಿಕೃತವೋ ಆಮೇಲೆ‌ ನಿರ್ಧರಿಸೋಣ. ಮೊದಲು ಬೆಂಗಳೂರಿನ ವೈಭವ ಮರುಕಳಿಸಲಿ. ನೀವು ಪರವಾನಗಿ ಪಡೆದು ಅಧಿಕೃತವಾಗಿಯೇ ಫ್ಲೆಕ್ಸ್ ಗಳನ್ನು ಹಾಕಿದ್ದರೆ ಅವುಗಳನ್ನು ಪುನಃ ತೂಗುಹಾಕುವ ಬಗ್ಗೆ ನಂತರ ನಿರ್ಧರಿಸೋಣ ಎಂದರು.

ನಗರದಲ್ಲಿ ಫ್ಲೆಕ್ಸ್ , ಬ್ಯಾನರ್ ಗಳ ಹಾವಳಿ ಹೆಚ್ಚಾಗಿದೆ. ಇದೊಂದು ತೊಂದರೆ ದಾಯಕ ವಿಚಾರ. ಈ ಸಮಸ್ಯೆಗೆ ಒಂದು ಇತಿಶ್ರೀ ಹಾಡಲೇಬೇಕು‌ ಇದು ಕೇವಲ ಇಂದು ತೆರವು ಮಾಡಿ ಪುನಃ ನಾಳೆ‌ ಹಾಕುವುದಲ್ಲ. ಇದಕ್ಕೆ ಶಾಶ್ವತವಾಗಿ ತೆರೆ ಎಳೆಯಲು ಒಂದು ನೀತಿ ರೂಪಿಸಬೇಕು. ಆ ನೀತಿ ಹೇಗಿರುತ್ತದೆ ಎನ್ನುವುದನ್ನು ಮುಂದಿನ ವಿಚಾರಣೆಯಲ್ಲಿ ತಿಳಿಸಿ ಎಂದು ಬಿಬಿಎಂಪಿಗೆ ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಇದೇ 8ಕ್ಕೆ ವಿಚಾರಣೆ ಮುಂದೂಡಿದೆ. ವಿಚಾರಣೆ ವೇಳೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹಾಜರಿದ್ದರು.

ಹಿಂದೆಯೂ ನಗರದ ರಸ್ತೆ ಬದಿಗಳಲ್ಲಿ ಅನಧಿಕೃತವಾಗಿ ಹಾಗು ನಗರದ ಅಂದ ಕೆಡಿಸುವ ರೀತಿಯಲ್ಲಿ ಎಲ್ಲೆಂದರಲ್ಲಿ ಅಳವಡಿಸುತ್ತಿರುವ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ಸ್ ಗಳನ್ನು ತೆರವು ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ಸೂಕ್ತ ಜಾಹೀರಾತು ನೀತಿ ರೂಪಿಸಲು ಹೈಕೋರ್ಟ್ ಬಿಬಿಎಂಪಿಗೆ ನಿರ್ದೇಶನ ನೀಡಿತ್ತು. ಹೈಕೋರ್ಟ್ ನಿರ್ದೇಶನದ ಮೇರೆಗೆ ಬಿಬಿಎಂಪಿ ಜಾಹೀರಾತು ನೀತಿ ರೂಪಿಸುವುದಾಗಿ ತಿಳಿಸಿತ್ತು. ಆದರೆ ಹೊಸದಾಗಿ ನಿಯಮಗಳನ್ನು ರೂಪಿಸಿ ಜಾರಿಗೆ ತರುವಲ್ಲಿ ಬಿಬಿಎಂಪಿ ವಿಳಂಬ ಮಾಡಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್ ಕೂಡಲೇ ನಗರದಲ್ಲಿ ಇರುವ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಹಾಗು ಹೋರ್ಡಿಂಗ್ಸ್ ಗಳನ್ನು ತೆರವು ಮಾಡಲು ಬಿಬಿಎಂಪಿ ಗೆ ನಿರ್ದೇಶನ ನೀಡಿದೆ.

- Call for authors -

LEAVE A REPLY

Please enter your comment!
Please enter your name here