ಮಂಗಳೂರು:ಕಳೆದ 6 ತಿಂಗಳಿನಿಂದ ಕಾಂಕ್ರೀಟ್ ರಸ್ತೆ ನಿರ್ಮಾಣದ ಉದ್ದೇಶದಿಂದ ವಾಹನ ಸಂಚಾರವನ್ನು ನಿಷೇಧಿಸಿದ್ದ ಶಿರಾಡಿ ಘಾಟ್ ನ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಇಂದಿನಿಂದ ಮತ್ತೆ ಸಂಚಾರ ಪುನರಾರಂಭಗೊಂಡಿದೆ.
ಲೋಕೋಪಯೋಗಿ ಸಚಿವ ಎಚ್. ಡಿ ರೇವಣ್ಣ, ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಯು ಟಿ ಖಾದರ್,ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ನೂತನವಾಗಿ ಕಾಂಕ್ರೀಟೀಕರಣಗೊಂಡ ರಸ್ತೆಯನ್ನು ಗುಂಡ್ಯದಲ್ಲಿ ಸಾಂಕೇತಿಕವಾಗಿ ಉದ್ಘಾಟನೆ ಮಾಡುವ ಮೂಲಕ ಶಿರಾಡಿ ಘಾಟ್ ಅನ್ನ ಸಂಚಾರಕ್ಕೆ ಮುಕ್ತಗೊಳಿಸಿದ್ರು.
ಶಿರಾಡಿ ಘಾಟ್ ನಲ್ಲಿ ಸಧ್ಯ ಲಘು ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದೆ.ಘಾಟ್ ಕಾಮಗಾರಿ ಅಪೂರ್ಣ ಆಗಿದ್ದರಿಂದ ಭಾರೀ ವಾಹನ, ಬಸ್ ಸಂಚಾರಕ್ಕೆ ತಡೆ ಮುಂದುವರದಿದೆ.ಕೇವಲ ದ್ವಿಚಕ್ರ, ತ್ರಿಚಕ್ರ, ಮಿನಿ ಬಸ್, ಟೆಂಪೊ ಟ್ರಾವಲರ್ಸ್ ಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
15 ದಿನಗಳ ಕಾಲಾವಕಾಶವನ್ನು ಗುತ್ತಿಗೆದಾರರಿಗೆ ನೀಡಿದ್ದು,ಈ ಅವಧಿಯೊಳಗೆ ಡೇಂಜರ ಝೋನ್ ಕಾಮಗಾರಿ ಮುಗಿಸಲು ಸೂಚನೆ ನೀಡಲಾಗಿದೆ.ಆಗಸ್ಟ್ ಮೊದಲ ವಾರದಲ್ಲಿ ಎಲ್ಲಾ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುತ್ತೆ ಎಂದು ಅಧಿಕಾರಿಗಳು ಸುದ್ದಿಲೋಕ ವೆಬ್ ಪೋರ್ಟಲ್ ಗೆ ಮಾಹಿತಿ ನೀಡಿದ್ದಾರೆ.









